ಕನ್ನಡ (Kannada): Indian Revised Version - Kannada

Updated ? hours ago # views See on DCS

ಪೌಲನು ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ

Chapter 1

1 ನಮ್ಮ ರಕ್ಷಕನಾದ ದೇವರಿಂದಲೂ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನಿಂದಲೂ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು 2 ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ 3 ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ 4 ಕಲ್ಪಿತಕಥೆಗಳಿಗೂ ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ ಅಂತಹ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ 5 ಶುದ್ಧಹೃದಯ ಒಳ್ಳೆಯ ಮನಸ್ಸಾಕ್ಷಿ ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ 6 ಕೆಲವರು ಈ ಗುರಿಯನ್ನು ಬಿಟ್ಟು ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ 7 ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ 8 ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು 9 ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ ಆದರೆ ಅಕ್ರಮಗಾರರು ಅವಿಧೇಯರು ಭಕ್ತಿಹೀನರು ಪಾಪಿಷ್ಠರು ಅಪವಿತ್ರರು ಪ್ರಾಪಂಚಿಕರು ತಂದೆತಾಯಿಗಳನ್ನು ಕೊಲ್ಲುವವರು ನರಹತ್ಯಮಾಡುವವರು 10 ಜಾರರು ಸಲಿಂಗಕಾಮಿಗಳು ನರಚೋರರು ಸುಳ್ಳುಗಾರರು ಅಸತ್ಯವಾದಿಗಳು ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ 11 ಈ ಬೋಧನೆಯು ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು 12-13[1] ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, [2] ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, [3] ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ [4] ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ [5] ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು; 14 ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು 15 ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದ ಯಾಕೆಂದರೆ ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು 16 ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು 17 ಸರ್ವಯುಗಗಳ ಅರಸನೂ ಅಮರನೂ ಅದೃಶ್ಯನೂ ಆಗಿರುವ ಏಕದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ ಆಮೆನ್ 18 ಮಗನಾದ ತಿಮೊಥೆಯನೇ ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ 19 ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯೆಂಬ ಹಡಗು ಒಡೆದು ನಷ್ಟಪಟ್ಟವರಂತೆ ಇದ್ದಾರೆ 20 ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು


1:12-13 [1] ಆ. ಕೃ 9:22; ಫಿಲಿ 4:13; 2 ತಿಮೊ 4:17
1:12-13 [2] ಆ. ಕೃ 8:3
1:12-13 [3] 2 ಕೊರಿ. 3:6
1:12-13 [4] ಆ. ಕೃ. 3:17
1:12-13 [5] 1 ಕೊರಿ 7:25; 2 ಕೊರಿ 4:1

Chapter 2

ಸಭೆಯ ಪ್ರಾರ್ಥನೆ ಮತ್ತು ಆರಾಧನೆ

1 ಎಲ್ಲಾದಕ್ಕಿಂತ ಮೊದಲು ಎಲ್ಲಾ ಜನರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ 2 ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಜೀವಿಸುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು 3 ಹಾಗೆ ಮಾಡುವುದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಒಳ್ಳೆಯದು ಮೆಚ್ಚಿಕೆಯಾಗಿಯೂ ಇದೆ 4 ಎಲ್ಲಾ ಜನರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬುದೇ ಆತನ ಚಿತ್ತವಾಗಿದೆ 5 ಏಕೆಂದರೆ ದೇವರು ಒಬ್ಬನೇ ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ 6 ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಕೊಟ್ಟನು ಇದೇ ತಕ್ಕ ಸಮಯಗಳಲ್ಲಿ ಹೇಳಬೇಕಾದ ಸಾಕ್ಷಿಯಾಗಿದೆ 7 ಆ ಸಾಕ್ಷಿಯನ್ನು ಪ್ರಸಿದ್ಧಿಪಡಿಸುವುದಕ್ಕಾಗಿಯೇ ನಾನು ಸಂದೇಶವಾಹಕನಾಗಿಯೂ ಅಪೊಸ್ತಲನಾಗಿಯೂ ನಂಬಿಕೆಯಿಂದಲೂ ಸತ್ಯದಿಂದಲೂ ಅನ್ಯಜನರಿಗೆ ಬೋಧಿಸುವವನಾಗಿಯೂ ನೇಮಿಸಲ್ಪಟ್ಟಿದ್ದೇನೆ ನಾನು ಸುಳ್ಳಾಡದೇ ಸತ್ಯವನ್ನೇ ಹೇಳುತ್ತೇನೆ 8 ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿ ಪವಿತ್ರ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ 9 ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಸಭ್ಯತೆಯುಳ್ಳವರಾಗಿಯೂ ಇದ್ದು ಗೌರವಕ್ಕೆ ತಕ್ಕ ಉಡುಪನ್ನೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ ಅವರು ಜಡೆಯನ್ನು ಹೆಣೆಯುವುದು ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ 10 ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು 11 ಸ್ತ್ರೀಯರು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಉಪದೇಶವನ್ನು ಕಲಿಯಬೇಕು 12 ಉಪದೇಶಮಾಡುವುದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವುದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆ ಕೊಡುವುದಿಲ್ಲ ಅವರು ಮೌನವಾಗಿರಬೇಕು 13 ಮೊದಲು ಸೃಷ್ಟಿಸಲ್ಪಟವನು ಆದಾಮನಲ್ಲವೇ ಆಮೇಲೆ ಹವ್ವಳು 14 ಇದಲ್ಲದೆ ಆದಾಮನು ವಂಚಿಸಲ್ಪಡಲಿಲ್ಲ ಸ್ತ್ರೀಯು ವಂಚಿಸಲ್ಪಟ್ಟು ಅಪರಾಧಿಯಾದಳು 15 ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆಹೊಂದುವರು

Chapter 3

ಸಭಾಧ್ಯಕ್ಷರೂ ಸಭಾಸೇವಕರೂ ಯೋಗ್ಯರಾಗಿರಬೇಕು

1 ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ 2 ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ ಏಕಪತ್ನಿಯುಳ್ಳವನೂ ಶಾಂತನೂ ಜಿತೇಂದ್ರಿಯನೂ ಮಾನಸ್ಥನೂ ಅತಿಥಿಸತ್ಕಾರಮಾಡುವವನೂ ಬೋಧಿಸಲು ಶಕ್ತನಾಗಿರಬೇಕು 3 ಅವನು ಕುಡಕನು ಜಗಳವಾಡುವವನೂ ಆಗಿರದೆ ಸಾತ್ವಿಕನೂ ಹೊಡೆದಾಡದವನೂ ದ್ರವ್ಯಾಶೆಯಿಲ್ಲದವನೂ ಆಗಿರಬೇಕು 4 ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು 5 ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು 6 ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು 7 ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು 8 ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು ಅವರು ಎರಡು ಮಾತಿನವರೂ ಮದ್ಯಾಸಕ್ತರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ 9 ನಂಬಿಕೆಯಿಂದ ಪ್ರಕಟವಾಗಿರುವ ಸತ್ಯಾರ್ಥವನ್ನು ಶುದ್ಧ ಮನಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು 10 ಇದಲ್ಲದೆ ಅವರು ಮೊದಲು ಪರೀಕ್ಷಿಸಲ್ಪಡಬೇಕು ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ 11 ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು ಚಾಡಿಹೇಳುವವರಾಗಿರದೆ ಸ್ವಸ್ಥಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು 12 ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು 13 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ 14 ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ 15 ಆದರೆ ಒಂದು ವೇಳೆ ನಾನು ತಡಮಾಡಿದರೂ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ ಯಾಕೆಂದರೆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ 16 ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಅದೇನಂದರೆ ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು ದೇವದೂತರಿಗೆ ಕಾಣಿಸಿಕೊಂಡನು ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು ಲೋಕದಲ್ಲಿ ನಂಬಲ್ಪಟ್ಟನು ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು

Chapter 4

ದುರ್ಬೋಧಕರು

1 ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ 2 ಕಪಟದಿಂದ ಸುಳ್ಳಾಡುವವರು ಸ್ವಂತ ಮನಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು 3 ಅವರು ವಿಶ್ವಾಸಿಗಳಿಗೆ ಮದುವೆಯಾಗಬಾರದೆಂದತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ ಅವರು ಕೃತಜ್ಞತಾಸ್ತುತಿಮಾಡಿ ತಿನ್ನುವುದಕ್ಕೋಸ್ಕರ ದೇವರು ಉಂಟುಮಾಡಿದ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು 4 ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು ತಿರಸ್ಕರಿಸಬೇಕಾಗಿಲ್ಲ 5 ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ 6 ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ 7 ಅಜ್ಜಿ ಕಥೆಗಳನ್ನೂ ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ 8 ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು 9 ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ 10 ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ ಪ್ರಯಾಸಪಡುತ್ತಿದ್ದೇವೆ ಯಾಕೆಂದರೆ ಎಲ್ಲಾ ಮನುಷ್ಯರಿಗೂ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ 11 ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು 12 ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು 13 ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ ಪ್ರಬೋಧಿಸುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು 14 ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ ಆ ವರವು ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ 15 ಈ ಕಾರ್ಯಗಳನ್ನು ಸಾಧಿಸುತ್ತಾ ಅವುಗಳಲ್ಲಿ ಮಗ್ನನಾಗಿರು ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು 16 ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು ನೀನು ಈ ಕಾರ್ಯಗಳಲ್ಲಿ ನಿರತನಾಗಿರು ಆಗ ನೀನು ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ

Chapter 5

ವಿಶ್ವಾಸಿಗಳೊಂದಿಗಿನ ಕರ್ತವ್ಯಗಳು

1 ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ 2 ವೃದ್ಧಸ್ತ್ರೀಯರನ್ನು ತಾಯಿಯಂತೆಯೂ ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ತಕ್ಕ ಹಾಗೆ ಬುದ್ಧಿಹೇಳು 3-4 ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ [1] ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. [2] ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. 5 ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು 6 ಆದರೆ ಸುಖಭೋಗದಲ್ಲಿರುವ ವಿಧವೆಯು ಬದುಕಿದ್ದರೂ ಸತ್ತಂತೆಯೇ 7 ವಿಧವೆಯರು ನಿಂದೆಗೆ ಗುರಿಯಾಗದಂತೆ ಈ ವಿಷಯಗಳನ್ನು ಆಜ್ಞಾಪಿಸು 8 ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ 9 ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ 10 ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿದ್ದಲ್ಲಿ ಅವರು ಮಕ್ಕಳನ್ನು ಸಾಕಿಕೊಂಡು ಅತಿಥಿಸತ್ಕಾರವನ್ನು ಮಾಡುತ್ತಾ ದೇವಜನರಿಗೆ ಉಪಚಾರಮಾಡಿದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡುತ್ತಾ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಿರಲಿ 11 ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು 12 ಅಂಥವರು ತಾವು ಮೊದಲು ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗಿರುವರು 13 ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ ಮೈಗಳ್ಳರಾಗುವುದಲ್ಲದೆ ಹರಟೆಮಾತನಾಡುವವರೂ ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ 14 ಆದ್ದರಿಂದ ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು 15 ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ 16 ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು 17 ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು 18 ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು ಮತ್ತು ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ ಎಂದು ಶಾಸ್ತ್ರದಲ್ಲಿ ಹೇಳಿದೆಯಲ್ಲಾ 19 ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಒಪ್ಪಿಕೊಳ್ಳಬೇಡ 20 ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು ಇವರಿಂದ ಉಳಿದವರಿಗೂ ಭಯವುಂಟಾಗುವುದು 21 ನೀನು ವಿಚಾರಿಸುವುದಕ್ಕೆ ಮೊದಲೇ ತಪ್ಪುಹೊರಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ನಾನು ಹೇಳಿರುವ ಮಾತುಗಳ ಪ್ರಕಾರವೇ ನಡೆಯಬೇಕೆಂದು ದೇವರ ಮುಂದೆಯೂ ಕ್ರಿಸ್ತ ಯೇಸುವಿನ ಮುಂದೆಯೂ ಆರಿಸಲ್ಪಟ್ಟಿರುವ ದೇವದೂತರ ಮುಂದೆಯೂ ಖಂಡಿತವಾಗಿ ಹೇಳುತ್ತೇನೆ 22 ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ನಾಯಕತ್ವಕ್ಕೆ ನೇಮಿಸಬೇಡ ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನಾಗದೆ ನೀನು ಶುದ್ಧನಾಗಿರುವ ಹಾಗೆ ನೋಡಿಕೋ 23 ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೊ 24 ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ 25 ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ ಮರೆಯಾಗಿರಲಾರವು


5:3-4 [1] ಮತ್ತಾ 15:4-6; ಮಾರ್ಕ 7:10-13; ಎಫೆ. 6:1,2; ಆದಿ. 45:9-11
5:3-4 [2] 1 ತಿಮೊ. 2:3

Chapter 6

1 ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ 2 ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ ತಮ್ಮ ಸೇವೆಯ ಫಲವನ್ನು ಹೊಂದುವವರು ನಂಬಿಗಸ್ತರು ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು 3 ಯಾವನಾದರೂ ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ 4 ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು ನಿಂದನೆ ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ ಇವುಗಳಿಂದ ಹೊಟ್ಟೆಕಿಚ್ಚು ಜಗಳ ದೂಷಣೆ ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ 5 ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ 6 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ 7 ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು 8 ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು ನಾವು ಸಂತುಷ್ಟರಾಗುತ್ತವೆ 9 ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ 10 ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ 11 ಎಲೈ ದೇವರ ಮನುಷ್ಯನೇ ನೀನಾದರೋ ಇವುಗಳಿಗೆ ದೂರವಾಗಿರು ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು 12 ಕ್ರಿಸ್ತ ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು ನಿತ್ಯಜೀವವನ್ನು ಹಿಡಿದುಕೋ ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ 13 ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ ಪೊಂತ್ಯ ಪಿಲಾತನ ಕಾಲದಲ್ಲಿ ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ 14 ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು 15 ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು ಆ ಏಕಾಧಿಪತಿಯು ರಾಜಾಧಿರಾಜನೂ ಕರ್ತಾಧಿಕರ್ತನೂ 16 ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ ಯಾರೂ ಕಾಣಲಾರರು ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ ಆಮೆನ್ 17 ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕು 18-19 ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, [1] ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, [2] ಪರೋಪಕಾರಮಾಡುವವರೂ ಆಗಿದ್ದು, [3] ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು.

20 ಎಲೈ ತಿಮೊಥೆಯನೇ ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ 21 ಕೆಲವರು ಆ ಸುಳ್ಳಾದ ಜ್ಞಾನವನ್ನು ಒಪ್ಪಿಕೊಂಡು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗಿ ಹೋದರು ಕೃಪೆಯು ನಿಮ್ಮೊಂದಿಗಿರಲಿ


6:18-19 [1] ಲೂಕ 12:21
6:18-19 [2] ರೋಮಾ. 12:13
6:18-19 [3] ಮತ್ತಾ. 6:19, 20