ಪೌಲನು ಎಫೆಸದವರಿಗೆ ಬರೆದ ಪತ್ರಿಕೆ
Chapter 1
ಪೀಠಿಕೆ
1[1] ದೇವರ ಚಿತ್ತಾನುಸಾರವಾಗಿ [2] ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು [3] ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ [4] ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ, 2[5] ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು
3 ನಮ್ಮ ಕರ್ತನಾದ ಯೇಸುಕ್ರಿಸ್ತನ [6] ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು [7] ಪರಲೋಕದಲ್ಲಿನ ಸಕಲ ಆತ್ಮಿಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. 4 ನಾವು ಆತನ ಸನ್ನಿಧಿಯಲ್ಲಿ [8] ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು [9] ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. 5[10] ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ [11] ನಮ್ಮನ್ನು ತನ್ನ ಮಕ್ಕಳನ್ನಾಗಿ ದತ್ತು ತೆಗೆದುಕೊಳ್ಳಲು ಪ್ರೀತಿಯಿಂದ [12] ಮೊದಲೇ ಸಂಕಲ್ಪಮಾಡಿದ್ದನು. 6 ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. 7 ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ [13] ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ [14] ಪಾಪ ಕ್ಷಮಾಪಣೆಯೆಂಬ [15] ವಿಮೋಚನೆಯು ಉಂಟಾಯಿತು. 8 ಈ ಕೃಪೆಯನ್ನು ಆತನು [16] ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. 9 ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ. 10 ಕಾಲವು ಪರಿಪೂರ್ಣವಾದಾಗ, ಆತನು [17] ಭೂಪರಲೋಕಗಳಲ್ಲಿರುವ ಸಮಸ್ತವನ್ನು [18] ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
11 ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು [19] ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. 12 ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
13 ನೀವು ಸಹ ನಿಮ್ಮ ರಕ್ಷಣಾ [20] ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, [21] ವಾಗ್ದಾನಮಾಡಲ್ಪಟ್ಟ [22] ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. 14[23] ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ [24] ಪವಿತ್ರಾತ್ಮನು [25] ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ [26] . [27] ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
ಕೃತಜ್ಞತೆಯೂ ಪ್ರಾರ್ಥನೆಯೂ
15 ಹೀಗಿರಲಾಗಿ [28] ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ, 16[29] ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ. 17[30] ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ [31] ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳುವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. 18[32] ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು [33] ದೇವಜನರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬುದನ್ನೂ, 19 ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. 20 ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, [34] ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ 21 ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ [35] ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕೂರಿಸಿಕೊಂಡನು. 22 ಇದಲ್ಲದೆ [36] ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, [37] ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. 23[38] ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ [39] ಅದು ಸಂಪೂರ್ಣತೆಯುಳ್ಳದ್ದಾಗಿದೆ.
Chapter 2
ಮರಣದಿಂದ ಜೀವಕ್ಕೆ
1[1] ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ. 2 ಪೂರ್ವದಲ್ಲಿ [2] ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, [3] ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ. 3 ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, [4] ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. [5] ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು. 4 ಆದರೆ [6] ಕರುಣಾನಿಧಿಯಾಗಿರುವ ದೇವರು [7] ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, 5 ಅಪರಾಧಗಳ ದೆಸೆಯಿಂದ [8] ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. [9] ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. 6 ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ [10] ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು 7 ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, [11] ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ. 8[12] ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. [13] ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, [14] ಅದು ದೇವರ ದಾನವೇ. 9[15] ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, [16] ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 10[17] ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, [18] ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ [19] ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.
ಕ್ರಿಸ್ತನಲ್ಲಿ ಒಂದೇ ಜನಾಂಗ
11 ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ [20] ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ. 12 ಅಂದು [21] ನೀವು ಕ್ರಿಸ್ತನಿಂದ ದೂರವಿದವರೂ, [22] ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, [23] ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು [24] ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. 13 ಈಗಲಾದರೋ, [25] ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ [26] ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ. 14[27] ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ [28] ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು [29] ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ. 15 ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ [30] ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ. 16 ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ [31] ಇಲ್ಲವಾಗಿಸಿ, [32] ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ. 17 ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. 18 ಇದರಿಂದ [33] ಆತನ ಮೂಲಕ ಉಭಯತ್ರರು [34] ಒಂದೇ ಆತ್ಮನಲ್ಲಿ [35] ತಂದೆಯ ಬಳಿಗೆ [36] ಪ್ರವೇಶಿಸಲು ಮಾರ್ಗವಾಯಿತು. 19 ಹೀಗಿರಲಾಗಿ ನೀವು ಇನ್ನು ಮೇಲೆ [37] ಪರದೇಶದವರೂ ಅನ್ಯರೂ ಆಗಿರದೇ [38] ದೇವಜನರೊಂದಿಗೆ ಒಂದೇ ಸಂಸ್ಥಾನದವರೂ [39] ದೇವರ ಮನೆಯವರೂ ಆಗಿದ್ದೀರಿ. 20[40] ಅಪೊಸ್ತಲರೂ [41] ಪ್ರವಾದಿಗಳೂ ಎಂಬ [42] ಅಡಿಪಾಯದ ಮೇಲೆ [43] ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. [44] ಯೇಸು ಕ್ರಿಸ್ತನೇ [45] ಮುಖ್ಯವಾದ ಮೂಲೆಗಲ್ಲು. 21[46] ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ದಿಯಾಗುತ್ತಾ ಕರ್ತನಲ್ಲಿ [47] ಪರಿಶುದ್ಧ ದೇವಾಲಯವಾಗುತ್ತದೆ. 22[48] ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ [49] ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.
Chapter 3
ಅನ್ಯಜನರ ಬೋಧಕನಾದ ಪೌಲನು
1 ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ [1] ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ [2] ಸೆರೆಯಾಳಾಗಿದ್ದಾನೆ. 2[3] ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ [4] ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ, 3 ಆತನು ಮರ್ಮವನ್ನು [5] ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು [6] ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ. 4 ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು [7] ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು. 5 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. 6 ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ [8] ದೇವಜನರೊಂದಿಗೆ ಸಹಬಾಧ್ಯರೂ [9] ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ. 7 ದೇವರು [10] ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ [11] ನಾನು ಈ ಸುವಾರ್ತೆಗೆ ಸೇವಕನಾದೆನು. 8 ಕ್ರಿಸ್ತನ [12] ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು [13] ಅನ್ಯಜನರಿಗೆ ಸಾರುವ ಹಾಗೆಯೂ 9 ಹಾಗೂ [14] ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ [15] ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು [16] ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು. 10-11[17] ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ [18] ನಿತ್ಯಸಂಕಲ್ಪದ ಮೇರೆಗೆ ತನ್ನ [19] ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ [20] ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು. 12[21] ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ [22] ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ. 13 ಆದ್ದರಿಂದ [23] ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. [24] ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಎಫೆಸದವರಿಗಾಗಿ ಪ್ರಾರ್ಥನೆ
14-15 ಹೀಗಿರಲಾಗಿ [25] ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಕುಟುಂಬವು ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು, 16 ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ [26] ವಿಶೇಷಬಲವನ್ನು ಹೊಂದುವಂತೆಯೂ, 17[27] ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು [28] ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ. 18[29] ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ, 19 ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, [30] ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
20[31] ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ [32] ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ 21[33] ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.
Chapter 4
ಕ್ರಿಸ್ತನ ದೇಹದಲ್ಲಿನ ಐಕ್ಯತೆ
1 ನೀವು ದೇವರಿಂದ [1] ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ [2] ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ [3] ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2 ನೀವು ಪೂರ್ಣ [4] ವಿನಯ, ಸಾತ್ವಿಕತ್ವಗಳಿಂದಲೂ [5] ದೀರ್ಘಶಾಂತಿಯಿಂದಲೂ ಕೂಡಿದವರಾಗಿ, [6] ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. 3[7] ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. 4 ನೀವು ಕರೆಯಲ್ಪಟ್ಟಾಗ [8] ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, [9] ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, [10] ಒಬ್ಬನೇ ಆತ್ಮನನ್ನು ಹೊಂದಿದವರು, 5 ನಿಮ್ಮೆಲ್ಲರಿಗೂ [11] ಕರ್ತನು ಒಬ್ಬನೇ, [12] ನಂಬಿಕೆಯು ಒಂದೇ, [13] ದೀಕ್ಷಾಸ್ನಾನ ಒಂದೇ, 6[14] ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. [15] ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
7 ಆದರೆ [16] ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ. 8 ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ,
[17] <<ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ
[18] ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ
ಮನುಷ್ಯರಿಗೆ ವರಗಳನ್ನು ಕೊಟ್ಟನು.>>
9[19] <<ಏರಿಹೋದನೆಂದು>> ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ? 10 ಇಳಿದು ಬಂದಾತನು, [20] ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ [21] ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ. 11 ಆತನು [22] ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, [23] ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು [24] ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು. 12 ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು, [25] ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ, 13 ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, [26] ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು. 14 ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು [27] ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ, 15 ಆದರೆ [28] ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ [29] ಎಲ್ಲಾ ವಿಷಯಗಳಲ್ಲಿಯೂ [30] ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ. 16[31] ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, [32] ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.
ಕ್ರಿಸ್ತನಲ್ಲಿ ಹೊಸ ಜೀವನ
17 ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ [33] ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. [34] ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ. 18[35] ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು [36] ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ [37] ದೂರವಾಗಿದ್ದಾರೆ. 19 ಅವರು ಲಜ್ಜೆಗೆಟ್ಟವರಾಗಿ [38] ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ. 20 ನೀವಾದರೋ [39] ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ. 21 ಆತನಿಂದಲೇ ಕೇಳಿ [40] ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ. 22 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ [41] ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ [42] ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. 23[43] ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, [44] ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ [45] ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
25 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು [46] <<ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.>> ಏಕೆಂದರೆ [47] ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ. 26[48] <<ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,>> ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ. 27[49] ಸೈತಾನನಿಗೆ ಅವಕಾಶಕೊಡಬೇಡಿರಿ. 28 ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ [50] ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು. 29[51] ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ [52] ಕೇಳುವವರಿಗೆ ಹಿತವಾಗಿ ತೋರುವುದು. 30[53] ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ [54] ಮುದ್ರೆ ಹೊಂದಿದ್ದೀರಲ್ಲಾ. 31[55] ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. 32[56] ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು [57] ಕ್ಷಮಿಸಿರಿ.
Chapter 5
ಪ್ರೀತಿಯಲ್ಲಿ ನಡೆಯಿರಿ
1 ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ [1] ಆತನನ್ನು ಅನುಸರಿಸುವವರಾಗಿರಿ. 2[2] ಕ್ರಿಸ್ತನು ನಮ್ಮನ್ನು ಪ್ರೀತಿಸಿ [3] ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, [4] ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ [5] ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
3[6] ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ [7] ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು. 4[8] ಹೊಲಸು ಮಾತು, ಹುಚ್ಚು ಮಾತು, ಕುಚೋದ್ಯ ಇವು ಬೇಡ. ಇವು ಅಯುಕ್ತವಾಗಿವೆ. ಆದರೆ ಇವುಗಳಿಗೆ ಪ್ರತಿಯಾಗಿ [9] ದೇವರಿಗೆ ಕೃತಜ್ಞತಾಸ್ತುತಿಮಾಡಿರಿ. 5[10] ಜಾರನಿಗಾಗಲಿ, ದುರಾಚಾರಿಗಾಗಲಿ, [11] ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ. 6[12] ಹುರುಳಿಲ್ಲದ ಮಾತುಗಳಿಂದ ಯಾರು ನಿಮ್ಮನ್ನು ವಂಚಿಸದಿರಲಿ, [13] ಇಂಥ ಕೃತ್ಯಗಳ ನಿಮಿತ್ತ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ. 7 ಆದುದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
8 ಏಕೆಂದರೆ [14] ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. [15] ಬೆಳಕಿನವರಂತೆ ನಡೆದುಕೊಳ್ಳಿರಿ. 9[16] ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. 10[17] ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಿರಿ. 11 ನಿಷ್ಪ್ರಯೋಜಕವಾದ [18] ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ. 12[19] ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ. 13[20] ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ಬಹಿರಂಗವಾಗುತ್ತದೆ. ಯಾಕೆಂದರೆ ಎಲ್ಲಾವನ್ನೂ [21] ಬಹಿರಂಗಪಡಿಸುವಂಥದ್ದು ಬೆಳಕೇ.
14 ಆದ್ದರಿಂದ,
[22] <<ನಿದ್ರೆ ಮಾಡುವವನೇ, ಎಚ್ಚರವಾಗು!
[23] ಸತ್ತವರನ್ನು ಬಿಟ್ಟು ಏಳು!
ಆಗ [24] ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು>> ಎಂದು ಹೇಳಿಯದೆಯಲ್ಲಾ.
15[25] ಆದಕಾರಣ ನೀವು ನಡೆದುಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಅಜ್ಞಾನಿಗಳಾಗಿರದೆ ಜ್ಞಾನವಂತರಾಗಿರಿ. 16 ಈ ದಿನಗಳು ಕೆಡುಕಿನಿಂದ ಕೂಡಿದವುಗಳಾಗಿರುವುದ್ದರಿಂದ [26] ಕಾಲವನ್ನು ಸದುಪಯೋಗಪಡಿಸಿಕೊಳ್ಳಿರಿ. 17 ಮತ್ತು ಬುದ್ಧಿಹೀನರಾಗಿ ನಡೆಯದೆ [27] ಕರ್ತನ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18[28] ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ [29] ಪವಿತ್ರಾತ್ಮಭರಿತರಾಗಿದ್ದು, 19[30] ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ. 20 ಯಾವಾಗಲೂ ಎಲ್ಲಾ ಕಾರ್ಯಗಳಿಗಾಗಿ [31] ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರವನ್ನು ಮಾಡಿರಿ. 21 ಕ್ರಿಸ್ತನಿಗೆ ಭಯಪಡುವವರಾಗಿದ್ದು, [32] ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.
ಗಂಡಹೆಂಡತಿಯರು
22[33] ಸತಿಯರೇ, ನೀವು [34] ಕರ್ತನಿಗೆ ಹೇಗೋ ಹಾಗೆಯೇ [35] ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. 23[36] ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ [37] ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. [38] ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. 24 ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
25 ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ [39] ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. 26 ಆತನು ಅದನ್ನು ಪಾವನಗೊಳಿಸುವುದಕ್ಕಾಗಿ [40] ತನ್ನನ್ನು ತಾನೇ ಒಪ್ಪಿಸಿಕೊಟ್ಟನು. 27 ಅದನ್ನು [41] ಕಳಂಕ ಸುಕ್ಕು ಮುಂತಾದದ್ದೊಂದೂ ಇಲ್ಲದಂತೆ ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ [42] ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು [43] ವಾಕ್ಯೋಪದೇಶ ಸಹಿತವಾದ [44] ಜಲಸ್ನಾನವನ್ನು ಮಾಡಿಸಿ ಶುದ್ಧಿಮಾಡಿದನು. 28 ಹಾಗೆಯೇ [45] ಗಂಡದಿರು ಸಹ ತನ್ನ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. 29 ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ. 30[46] ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ. 31 <<ಈ ಕಾರಣದಿಂದ [47] ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.>> ಎಂದು ಬರೆದದೆಯಲ್ಲಾ. 32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು. 33 ಆದರೆ [48] ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. [49] ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌವರದಿಂದ ನಡೆದುಕೊಳ್ಳಬೇಕು.
Chapter 6
ತಂದೆತಾಯಿಗಳೂ ಮಕ್ಕಳೂ
1[1] ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು. 2 ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, [2] <<ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು, 3 ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.>>
4[3] ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ.
ಯಜಮಾನರೂ ದಾಸರೂ
5[4] ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ [5] ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ. 6[6] ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ. 7 ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಮನಃಪೂರ್ವಕವಾಗಿ ಸೇವೆಮಾಡಿರಿ. 8 ಯಾಕೆಂದರೆ [7] ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ [8] ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬುದನ್ನು ನೀವು ತಿಳಿದವರಾಗಿದ್ದೀರಿ.
9 ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. [9] ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ [10] ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.
ದೇವರ ಸರ್ವಾಯುಧಗಳು
10 ಕಡೆಯದಾಗಿ, ನೀವು [11] ಕರ್ತನಲ್ಲಿಯೂ [12] ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. 11 ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ [13] ಸರ್ವಾಯುಧಗಳನ್ನು [14] ಧರಿಸಿಕೊಳ್ಳಿರಿ. 12 ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. [15] ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, [16] ಈ ಅಂಧಕಾರದ [17] ಲೋಕಾಧಿಪತಿಗಳ ಮೇಲೆಯೂ, [18] ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. 13 ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. 14[19] ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, [20] ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು, 15[21] ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. 16 ಎಲ್ಲಾದಕ್ಕಿಂತ ಹೆಚ್ಚಾಗಿ [22] ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು [23] ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. 17 ಇದಲ್ಲದೆ [24] ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು [25] ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ. 18 ನೀವು [26] ಪವಿತ್ರಾತ್ಮಪ್ರೇರಿತರಾಗಿ [27] ಎಲ್ಲಾ ಸಮಯಗಳಲ್ಲಿ [28] ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ [29] ವಿಜ್ಞಾಪನೆಮಾಡುತ್ತಾ [30] ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ. 19 ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ [31] ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು [32] ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ. 20 ಆ ಸುವಾರ್ತೆಯ ನಿಮಿತ್ತವಾಗಿ [33] ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ [34] ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.
ಕಡೆ ಮಾತುಗಳು
21[35] ನನ್ನ ವಿಷಯವನ್ನೂ ನನ್ನ ಕೆಲಸಕಾರ್ಯಗಳನ್ನೂ ನಿಮಗೆ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಸೇವಕನಾಗಿರುವ [36] ತುಖಿಕನು ನಿಮಗೆ ಎಲ್ಲವನ್ನೂ ತಿಳಿಸಿಕೊಡುವನು. 22 ನೀವು ನಮ್ಮ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಸಂತೈಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
23 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ [37] ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ. 24 ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ [38] ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.