ಪೌಲನು ಥೆಸಲೋನಿಕದವರಿಗೆ ಬರೆದ ಎರಡನೆಯ ಪತ್ರಿಕೆ
Chapter 1
ಪೀಠಿಕೆ
1[1] ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ, 2 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
ದೇವರಿಗೆ ಕೃತಜ್ಞತಾಸ್ತುತಿ
3[2] ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ. 4 ಹೀಗಿರುವುದರಿಂದ [3] ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ [4] ನಿಮಿತ್ತ [5] ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.
5[6] ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ [7] ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು. 6 ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ [8] ನಮ್ಮೊಡನೆ ಉಪಶಮನವನ್ನೂ ಕೊಡುವುದು [9] ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. 7 ಯೇಸು ಕರ್ತನು [10] ತನ್ನ ಶಕ್ತಿಯುತ ದೇವದೂತರೊಂದಿಗೆ [11] ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ [12] ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು. 8 ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ [13] ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು. 9 ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು. 10 ಆ ದಿನದಲ್ಲಿ ಆತನು ಬರುವಾಗ ತನ್ನ [14] ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು. 11[15] ಆದುದರಿಂದ [16] ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ [17] ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, [18] ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ. 12 ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆಯ ಹೊಂದುವುದು ನೀವೂ ಆತನಲ್ಲಿ ಮಹಿಮೆಯ ಹೊಂದುವಿರಿ.
Chapter 2
ಅಧರ್ಮ ಪುರುಷನು
1 ಸಹೋದರರೇ, ನಮ್ಮ ಕರ್ತನಾದ [1] ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು [2] ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ ನಿಮ್ಮನ್ನು ವಿನಂತಿಸುವುದೇನಂದರೆ, 2 ಕರ್ತನ ಆಗಮನದ ದಿನವು ಈಗಾಗಲೇ ಬಂದಿದೆಯೆಂಬುದಾಗಿ [3] ಆತ್ಮದಿಂದಾಗಲಿ [4] ಮಾತಿನಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ನೀವು ಬೇಗನೆ ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ.
3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ [5] ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ [6] ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ. 4 ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ [7] ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು [8] ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.
5 ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ? 6 ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ. 7[9] ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು. 8 ಆಗ [10] ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು [11] ತನ್ನ ಬಾಯಿಯ ಉಸಿರಿನಿಂದ [12] ಕೊಲ್ಲುವನು, [13] ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು. 9 ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ [14] ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ, 10 ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ [15] ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ. 11 ಇದೇ ಕಾರಣದಿಂದ [16] ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು [17] ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ. 12[18] ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ [19] ಗುರಿಯಾಗುವರು.
ದೃಢವಾಗಿ ನಿಲ್ಲಿರಿ
13[20] ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, [21] ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ, ಸತ್ಯದ ಮೇಲೆ ನಂಬಿಕೆಯನ್ನಿಟ್ಟು, [22] ರಕ್ಷಣೆಯನ್ನು ಪಡೆಯುವುದಕ್ಕಾಗಿ ದೇವರು ನಿಮ್ಮನ್ನು [23] ಆದಿಯಿಂದ ಆರಿಸಿಕೊಂಡಿದ್ದರಿಂದ ನಾವು [24] ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವುದಕ್ಕೆ ಬದ್ಧರಾಗಿದ್ದೇವೆ. 14 ನೀವು ಹೀಗೆ [25] ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು. 15 ಹೀಗಿರುವುದರಿಂದ ಸಹೋದರರೇ, [26] ದೃಢವಾಗಿ ನಿಲ್ಲಿರಿ. [27] ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ. 16 ಮತ್ತು [28] ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ [29] ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ, 17 ಸಕಲ ಸತ್ಕಾರ್ಯದಲ್ಲಿಯೂ, ಸದ್ವಾಕ್ಯದಲ್ಲಿಯೂ [30] ದೃಢಪಡಿಸಲಿ.
Chapter 3
ಪ್ರಾರ್ಥನೆಗಾಗಿ ವಿನಂತಿ
1 ಕಡೆಯದಾಗಿ, [1] ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ [2] ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ, 2[3] ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ. 3 ಆದರೆ [4] ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು [5] ಕೆಡುಕನ ಕೈಗೆ [6] ಸಿಕ್ಕದಂತೆ ಕಾಪಾಡುವನು. 4 ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು. 5 ನೀವು ದೇವರ ಪ್ರೀತಿಯಲ್ಲಿಯೂ [7] ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡಿಸಲಿ.
ಮೈಗಳ್ಳರಿಗೆ ಎಚ್ಚರಿಕೆ
6 ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ [8] ಸೋಮಾರಿಯಾಗಿ ನಡೆಯುವ ಪ್ರತಿ [9] ಸಹೋದರನಿಗೆ ನೀವು [10] ದೂರವಾಗಿರಬೇಕೆಂದು [11] ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ. 7[12] ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, [13] ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ. 8 ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, [14] ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು. 9[15] ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, [16] ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು. 10 ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, [17] <<ಕೆಲಸ ಮಾಡಲೊಲ್ಲದವನು ಊಟಮಾಡಬಾರ>> ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ. 11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, [18] ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ. 12 ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ. 13 ಸಹೋದರರೇ, [19] ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ. 14 ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ [20] ಅವನ ಸಹವಾಸದಲ್ಲಿ ಸೇರಬೇಡಿರಿ. 15 ಆದರೂ [21] ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
ಸಮಾಪ್ತಿ ವಾಕ್ಯಗಳು
16[22] ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ [23] ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
17[24] ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.
18[25] ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.